thumb|ಗೇಟ್ಸ್‌, ಬಿಲ್
1955-. ಮೈಕ್ರೊಸಾಫ್ಟ್‌ ಕಾರ್ಪೋರೇಶನ್ನ ಸ್ಥಾಪಕ ಹಾಗೂ ಅಧ್ಯಕ್ಷ. 1975ರಿಂದ 2000 ದವರೆಗೆ ಮೈಕ್ರೊಸಾಫ್ಟ್‌ನ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದಾರೆ. ಮೈಕ್ರೊಸಾಫ್ಟ್‌ ಒಂದು ವ್ಯಕ್ತಿಗತ ಕಂಪ್ಯುಟರ್ ಕಾರ್ಯನಿರ್ವಹಣೆಯ ಸಾಫ್ಟ್‌ವೇರ್ನ ಪ್ರಕಾಶನ ಹಾಗೂ ಅಭಿವೃದ್ಧಿಪಡಿಸುವ ಕಂಪನಿಯಾಗಿದೆ. 

ವಿಲಿಯಂ ಹೆನ್ರಿಗೇಟ್ಸ್‌ 1955ರ ಅಕ್ಟೋಬರ್ 28 ರಂದು ಸಿಯಾಟಲ್ನಲ್ಲಿ ಜನಿಸಿದರು. ತಮ್ಮ 19ನೆಯ ವಯಸ್ಸಿನಲ್ಲಿ ಸಾಫ್ಟ್‌ವೇರ್ ಕಂಪನಿಯನ್ನು ಸ್ಥಾಪಿಸಿದರು. 1975ರಲ್ಲಿ ಬಿಲ್ ಹಾಗೂ ಇವರ ಸಹಪಾಠಿ ಆಲೆನ್ ಇಬ್ಬರೂ ಸೇರಿ ಅದೇ ತಾನೇ ಮಾರುಕಟ್ಟೆಯನ್ನು ಪ್ರವೇಶಿಸಿದ್ದ ವ್ಯಕ್ತಿಗತ ಕಂಪ್ಯುಟರ್ಗೆ ಪ್ರೋಗ್ರಾಂಗಳನ್ನು ವಿನ್ಯಾಸಗೊಳಿಸುವ ಕೆಲಸ ಪ್ರಾರಂಭಿಸಿದರು. ಇಬ್ಬರೂ ಸೇರಿ ಮೈಕ್ರೊಸಾಫ್ಟ್‌ ಕಂಪನಿಯನ್ನು ಸ್ಥಾಪಿಸಿದರು. 1980ರಲ್ಲಿ ಐಬಿಎಂ (ಇಂಟರ್ನ್ಯಾಷನಲ್ ಬಿಸಿನೆಸ್ ಮೆಷಿನ್ಸ್‌ ಕಾರ್ಪೊರೇಷನ್) ಸಂಸ್ಥೆ ತನ್ನ ಮೊದಲ ವ್ಯಕ್ತಿಗತ ಕಂಪ್ಯುಟರ್ನ ಕಾರ್ಯಾಚರಣ ವ್ಯವಸ್ಥೆಯ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿಗಾಗಿ ಮೈಕ್ರೊಸಾಫ್ಟ್‌ ಕಂಪನಿಯನ್ನು ಆಯ್ಕೆ ಮಾಡಿತು. ಆಪರೇಟಿಂಗ್ ಸಿಸ್ಟಮ್ ಎನ್ನುವುದು ಕಂಪ್ಯುಟರ್ ಬಳಕೆಯನ್ನು ಮಾಡುವ ಸೂಚನೆಗಳನ್ನು ಹೊಂದಿರುತ್ತದೆ. ಐಬಿಎಂಗಾಗಿ ಬಿಲ್ಗೇಟ್ಸ್‌ ಮೈಕ್ರೊಸಾಫ್ಟ್‌ ಡಿಸ್ಕ್‌ ಆಪರೇಟಿಂಗ್ ಸಿಸ್ಟಮ್ ಯೋಜನೆಯನ್ನು ರೂಪಿಸಿದರು. ಗೇಟ್ಸ್‌ ಅವರ ಮಾರ್ಗದರ್ಶನದಲ್ಲಿ ಮೈಕ್ರೊಸಾಫ್ಟ್‌ ಕಂಪನಿಯು ಅಭಿವೃದ್ಧಿಯಾಗುತ್ತಿದೆ. 1980ರಲ್ಲಿ ಈ ಕಂಪನಿ ವಿಂಡೋಸ್ ಎನ್ನುವ ಪಿಸಿ ಪರ್ಸನಲ್ ಕಂಪ್ಯುಟರ್ ಪ್ರೋಗ್ರಾಂನ ಸರಣಿಯನ್ನು ಪರಿಚಯಿಸಿತು. ‘ವಿಂಡೋಸ್’ನ ಮೂಲಕ ವ್ಯಕ್ತಿಯು ಕಂಪ್ಯುಟರ್ ಸ್ಕ್ರೀನ್ನಲ್ಲಿ (ಒಟ್ಟಿಗೆ) ಒಮ್ಮೆಲೆ ವಿವಿಧ ರೀತಿಯ ಕಾರ್ಯಗಳನ್ನು ಮಾಡಬಹುದಲ್ಲದೆ ಪರದೆಯ ಮೇಲಿರುವ ಸೂಚನಾಚಿಹ್ನೆಗಳನ್ನು ಉಪಯೋಗಿಸಿ ಕಮ್ಯಾಂಡ್ ಮಾಡಬಹುದು. 

ಗೇಟ್ಸ್‌ ಫೌಂಡೇಶನ್ 

ಪ್ರಪಂಚದ ದೊಡ್ಡ ಚಾರಿಟಬಲ್ (ದತ್ತಿಸಂಸ್ಥೆ) ಫೌಂಡೇಶನ್ ಆಗಿದೆ. 1999ರಲ್ಲಿ ಬಿಲ್ಗೇಟ್ಸ್‌ ಹಾಗೂ ಇವರ ಪತ್ನಿಯಿಂದ ಸ್ಥಾಪಿತವಾಯಿತು. ಪ್ರಪಂಚಾದ್ಯಂತ ಆರೋಗ್ಯ ಮತ್ತು ಶಿಕ್ಷಣ ನೀಡುವ ಬಗ್ಗೆ ಗಮನ ಹರಿಸುತ್ತಿದೆ. ಹಿಂದುಳಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜನರ ಆರೋಗ್ಯ ಸುಧಾರಣೆಯತ್ತ ಕಾರ್ಯಕ್ರಮಗಳನ್ನು ನಿಯೋಜಿಸುತ್ತಿದೆ. ಮಕ್ಕಳನ್ನು ರೋಗಗಳಿಂದ ಮುಕ್ತಗೊಳಿಸಲು ಲಸಿಕೆಗಳನ್ನು ಸರಬರಾಜು ಮಾಡುತ್ತದೆ. ಅಲ್ಲದೆ ಅಲ್ಪಸಂಖ್ಯಾತ ಮಕ್ಕಳಿಗೆ ವಿದ್ಯಾರ್ಥಿ ವೇತನದ ವ್ಯವಸ್ಥೆಯನ್ನೂ ಮಾಡುತ್ತಿದ್ದು ವಿಕಲಾಂಗ ಚೇತನರಿಗೆ ಬಳಸಲು ಅನುಕೂಲ ವಾಗುವಂತೆ ತಾಂತ್ರಿಕ ಕೌಶಲ್ಯದ ಅಭಿವೃದ್ಧಿಯನ್ನು ಕೈಗೊಂಡಿದೆ. ಕೆಳ ಆರ್ಥಿಕ ವರ್ಗಗಳ ಸಾರ್ವಜನಿಕ ಗ್ರಂಥಾಲಯಗಳಿಗೆ ಕಂಪ್ಯುಟರ್ ಹಾಗೂ ಅಂತರ್ಜಾಲ ಬಳಕೆಯನ್ನು ಒದಗಿಸುತ್ತದೆ. ಇದರ ಕೇಂದ್ರ ಕಚೇರಿ ಸಿಯಾಟಲ್ನಲ್ಲಿದೆ.  		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ